Gruha Lakshmi Scheme Update: Biometric Verification Made Mandatory, Failure to Renew May Stop Payments

ರಾಜ್ಯದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯ ದುರ್ಬಳಕೆ ತಡೆಯಲು ಕಾಂಗ್ರೆಸ್ ಸರ್ಕಾರ ಹೊಸ ತಂತ್ರಜ್ಞಾನಾಧಾರಿತ ಕ್ರಮವನ್ನು ಜಾರಿಗೆ ತರಲು ಮುಂದಾಗಿದೆ. ಇನ್ನುಮುಂದೆ ಯೋಜನೆಯ ಎಲ್ಲ ಫಲಾನುಭವಿಗಳು ‘ಒನ್-ಟೈಮ್ ಬಯೋಮೆಟ್ರಿಕ್’ ಮೂಲಕ ತಮ್ಮ ಖಾತೆಯನ್ನು ಮರುನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಲಿದೆ. ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಿಗೆ ತೆರಳಿ, ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಹಾಗೂ ಬಯೋಮೆಟ್ರಿಕ್ ನೀಡಿದ ಬಳಿಕ ಮಾತ್ರ ಖಾತೆ ನವೀಕರಣವಾಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ ಗೃಹಲಕ್ಷ್ಮಿ ಹಣ ಖಾತೆಗೆ ಜಮೆಯಾಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಈ ಹೊಸ ಕ್ರಮದ ಮೂಲಕ ಅನರ್ಹರು, ಆದಾಯ ತೆರಿಗೆ ಪಾವತಿದಾರರು ಮತ್ತು ಮೃತಪಟ್ಟವರ ಹೆಸರಿನಲ್ಲಿ ಹಣ ಪಡೆಯುತ್ತಿರುವುದನ್ನು ತಡೆಯಲು ಸರ್ಕಾರ ಮುಂದಾಗಿದೆ. ಇಲಾಖೆಯ ಪ್ರಕಾರ, ಗೃಹಲಕ್ಷ್ಮಿ ಯೋಜನೆಯಲ್ಲಿ ಲಕ್ಷಾಂತರ ಫಲಾನುಭವಿಗಳ ಪೈಕಿ ಗಣನೀಯ ಸಂಖ್ಯೆಯವರು ಮೃತಪಟ್ಟಿದ್ದಾರೆ. ಸುಮಾರು ಎರಡು ಲಕ್ಷ ಮಂದಿ ಮೃತಪಟ್ಟಿದ್ದರೂ ಫಲಾನುಭವಿಗಳ ಪಟ್ಟಿಯಲ್ಲಿ ಇದ್ದು ಹಣ ಪಡೆಯುತ್ತಿದ್ದರೆ, 50 ಸಾವಿರಕ್ಕೂ ಹೆಚ್ಚು ಆದಾಯ ತೆರಿಗೆ ಪಾವತಿದಾರರೂ ಯೋಜನೆಯ ಲಾಭ ಪಡೆದಿರುವುದು ಕಂಡುಬಂದಿದೆ. ಕೆಲ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗುವ ಹಣ ಮೊದಲೇ ತೆಗೆದುಕೊಂಡ ಸಾಲಗಳಿಗೆ ಜಮೆಯಾಗುತ್ತಿರುವುದು ಮತ್ತು ಮೊಬೈಲ್ ಸಂಖ್ಯೆಗಳು ಬದಲಾಗಿರುವುದೂ ಸಮಸ್ಯೆಯಾಗಿದೆ.
ಇದರಿಂದ ಅರ್ಹ ಫಲಾನುಭವಿಗಳಿಗೆ ಮಾತ್ರ ಲಾಭ ತಲುಪುವಂತೆ ಮಾಡಲು ಖಾತೆಗಳ ಮರುಪರಿಶೀಲನೆ ಮತ್ತು ಬಯೋಮೆಟ್ರಿಕ್ ನವೀಕರಣವನ್ನು ಕಡ್ಡಾಯಗೊಳಿಸಲಾಗಿದೆ. ಈ ಹಿಂದೆ ಜೀವಿತ ಪ್ರಮಾಣಪತ್ರ ಸಲ್ಲಿಸುವ ಆಯ್ಕೆಯನ್ನೂ ಪರಿಗಣಿಸಲಾಗಿತ್ತು. ಆದರೆ ಅದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಬಯೋಮೆಟ್ರಿಕ್ ಆಧಾರಿತ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಂಡಿದೆ. ಹೊಸ ವ್ಯವಸ್ಥೆಯಲ್ಲಿ ಫಲಾನುಭವಿಯೊಬ್ಬರು ಒಮ್ಮೆ ಬಯೋಮೆಟ್ರಿಕ್ ನೀಡಿದರೆ ಸಾಕು, ಮುಂದಿನ ಹಣಕಾಸು ವರ್ಗಾವಣೆಗಳು ಎಂದಿನಂತೆ ನಡೆಯಲಿವೆ ಎಂದು ಸಚಿವೆ ಹೇಳಿದ್ದಾರೆ.
ಯೋಜನೆಗೆ ಸಂಬಂಧಿಸಿದ ಇನ್ನೊಂದು ಮಹತ್ವದ ಬದಲಾವಣೆ ಎಂದರೆ ಬಿಪಿಎಲ್ ಕಾರ್ಡ್ ಹೊಂದಿದ್ದರೂ ಆದಾಯ ತೆರಿಗೆ ಪಾವತಿಸುತ್ತಿರುವವರು ಈಗಾಗಲೇ ಪರಿಶೀಲನೆಗೆ ಒಳಗಾಗಿದ್ದಾರೆ. ಸರ್ಕಾರ ಸುಮಾರು 2 ಲಕ್ಷಕ್ಕೂ ಅಧಿಕ ಕಾರ್ಡ್ಗಳನ್ನು ಬಿಪಿಎಲ್ನಿಂದ ಎಪಿಎಲ್ಗೆ ವರ್ಗಾವಣೆ ಮಾಡಿದೆ ಎಂದು ತಿಳಿದುಬಂದಿದೆ. ಅಂತಹ ಫಲಾನುಭವಿಗಳಲ್ಲಿ ಬಹುತೇಕರು ಆದಾಯ ತೆರಿಗೆ ಪಾವತಿದಾರರಾಗಿದ್ದರಿಂದ ಅವರ ಕಾರ್ಡ್ಗಳು ರದ್ದಾಗಿವೆ ಅಥವಾ ಯೋಜನೆಯ ಅರ್ಹತೆ ಪ್ರಶ್ನೆಯಾಗಿದೆ.
ಗೃಹಲಕ್ಷ್ಮಿ ಖಾತೆ ನವೀಕರಣದ ವೇಳಾಪಟ್ಟಿ ಮತ್ತು ಅಧಿಕೃತ ಆದೇಶವನ್ನು ರಾಜ್ಯ ಸರ್ಕಾರ ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ. ನವೀಕರಣ ಮಾಡದ ಖಾತೆಗಳು ಸ್ವಯಂಚಾಲಿತವಾಗಿ ರದ್ದಾಗಲಿವೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಸರ್ಕಾರದ ಈ ಹೆಜ್ಜೆ ಯೋಜನೆಯ ಪಾರದರ್ಶಕತೆ ಹೆಚ್ಚಿಸಲು ಮತ್ತು ನಿಜವಾದ ಅರ್ಹ ಮಹಿಳಾ ಫಲಾನುಭವಿಗಳಿಗೆ ಹಣ ತಲುಪಿಸಲು ಕೈಗೊಂಡ ಕ್ರಮವಾಗಿ ಪರಿಗಣಿಸಲಾಗಿದೆ.





